ಕಾಗದದ ಉದ್ಯಮ

 ಕಾಗದ ತಯಾರಿಕೆ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ನೆಲೆಗೊಂಡಿತ್ತು. ಸ್ವಿಟ್ಸರ್ಲೆಂಡಿನ ಡಾ.ಸ್ಮಿಡ್ತ್‍ರವರ ಪ್ರಕಾರ ಕಾಗದ ತಯಾರಿಕೆ ಮೊದಲಾದುದು ಭಾರತದಲ್ಲೇ. ಕರ್ನಾಟಕದಲ್ಲೂ ಸ್ವಲ್ಪಮಟ್ಟಿಗೆ ಇದು ಗೃಹಕೈಗಾರಿಕೆಯಾಗಿ ಇದ್ದಿರಬೇಕು.

 ಮರದ ತೊಗಟೆ, ಹುಲ್ಲು ಮುಂತಾದ ಕಚ್ಚಾವಸ್ತುಗಳಿಂದ ಪ್ರಾರಂಭವಾದ ಕಾಗದದ ಉದ್ಯಮ ಕ್ರಮೇಣ ಹತ್ತಿ ಮತ್ತು ಹತ್ತಿಬಟ್ಟೆ ಚಿಂದಿಗಳ ಉಪಯೋಗದೊಡನೆ ಇಲ್ಲಿ ಚೆನ್ನಾಗಿ ಬೇರೂರಿತು. ಈ ಕಚ್ಚಾವಸ್ತುಗಳ ಸರಬರಾಜು ಮಿತವಾಗಿದ್ದು, ಕಾಗದದ ಕೈಗಾರಿಕೆಗೆ ಒಂದು ನಿಗದಿ ಇತ್ತು. ಡೆಹ್ರಾಡೂನಿನ ಅರಣ್ಯ ಸಂಶೋಧನ ಸಂಸ್ಥೆಯ ಸಂಶೋಧನೆಯಿಂದ ಕಾಗದದ ತಯಾರಿಕೆಗೆ ಬೊಂಬು ಒಳ್ಳೆಯ ಕಚ್ಚಾವಸ್ತುವಾಗಬಲ್ಲುದೆಂದು 1912ರ ವೇಳೆಗೆ ಖಚಿತವಾಯಿತು. ಈ ವೇಳೆಗೆ ಮೈಸೂರಿನ ದಿವಾನರಾಗಿದ್ದ ವಿಶ್ವೇಶ್ವರಯ್ಯನವರು ಈ ವಿಷಯದಲ್ಲಿ ಆಸಕ್ತಿ ವಹಿಸಿದರು. ಮುಂಬಯಿಯ ಅಯ್ಯರ್ ಮತ್ತು ಬಾಲಕೃಷ್ಣರವರ ನೇತೃತ್ವದಲ್ಲಿ ಹಲವು ಮೂಲಭೂತ ಅಧ್ಯಯನಗಳು ನಡೆದವು. ಅನಂತರ ಮಿರ್ಜಾ ಇಸ್ಮಾಯಿಲರು ಕರ್ನಾಟಕದ ಮೊಟ್ಟಮೊದಲ ಕಾಗದ ಕಾರ್ಖಾನೆಯಾದ ಭದ್ರಾವತಿಯ ಮೈಸೂರು ಪೇಪರ್ ಮಿಲ್ಸ್ ಸಂಸ್ಥೆಯನ್ನು 1936ರಲ್ಲಿ ಆರಂಭಿಸಿದರು. ಸರ್ಕಾರ ಮತ್ತು ಖಾಸಗಿ ಬಂಡವಾಳದೊಡನೆ ಪ್ರಾರಂಭವಾದ ಈ ಸಂಸ್ಥೆ ವರ್ಷಕ್ಕೆ 4000 ಟನ್ ಉತ್ಪಾದನಾ ಸಾಮಥ್ರ್ಯವುಳ್ಳದ್ದಾಗಿತ್ತು. ಕನ್ನಡ ನಾಡಿನ ಕಾಗದದ ಬೇಡಿಕೆ ಕಡಿಮೆಯಿದ್ದುದರಿಂದ ಹೆಚ್ಚು ಭಾಗ ತಮಿಳುನಾಡಿಗೆ ರಫ್ತಾಗುತ್ತಿತ್ತು. ಇದೇ ಕಾಲದಲ್ಲಿ ಗ್ರಾಮೋದ್ಯೋಗದ ಬೆಳೆವಣಿಗೆಯ ಅಂಗವಾಗಿ ಮೈಸೂರು ಸರ್ಕಾರ ಬದನವಾಳು ಖಾದಿಕೇಂದ್ರದಲ್ಲಿ ಕೈಯಲ್ಲಿ ಕಾಗದವನ್ನು ತಯಾರಿಸಲೂ ಆರಂಭಿ ಸಿತ್ತು. ಅನಂತರ ಮುಂಬಯಿ ಕರ್ನಾಟಕದಲ್ಲಿ ಬೊಂಬನ್ನು ಕಚ್ಚಾವಸ್ತುವಾಗಿ ಬಳಸಿ ಕಾಗದ ತಯಾರಿಸುವ ಉದ್ದೇಶದಿಂದ ಕರ್ನಾಟಕ ಪೇಪರ್ ಮಿಲ್ಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಲು ಪ್ರಯತ್ನ ನಡೆದು, 1956-58ರ ವೇಳೆಗೆ ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯಲ್ಲಿ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ ಸ್ಥಾಪಿತವಾಯಿತು. ಇದೇ ಸಮಯದಲ್ಲಿ ಕೊಡಗು, ಮೈಸೂರು, ಹಾಸನ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಾಗದ ಕಾರ್ಖಾನೆಗಳನ್ನು ಸ್ಥಾಪಿಸಲು ಪ್ರಯತ್ನಗಳು ನಡೆದುವು. ಸು.1954ರಲ್ಲಿ ನಂಜನಗೂಡಿನ ಕಾರ್ಖಾನೆ ಅಸ್ತಿತ್ವಕ್ಕೆ ಬಂತು.

 ಸಕ್ಕರೆ ಕಾರ್ಖಾನೆಗಳಲ್ಲಿ ದೊರೆಯುವ ಕಬ್ಬಿನ ಸಿಪ್ಪೆಯನ್ನು ಕಚ್ಚಾ ವಸ್ತುವಾಗಿ ಬಳಸಿ ಕಾಗದ ತಯಾರಿಸುವ ಉದ್ದಿಶ್ಯವನ್ನು ಇಟ್ಟುಕೊಂಡು ಮಂಡ್ಯ ನ್ಯಾಷನಲ್ ಪೇಪರ್ ಮಿಲ್ಸ್ ಎಂಬ ಕಾರ್ಖಾನೆ ಮೈಸೂರಿನ ಬಳಿ ಬೆಳಗೊಳದಲ್ಲಿ 1960ರಲ್ಲಿ ಸ್ಥಾಪಿತವಾಯಿತು. ಆದರೆ ಈ ಕಾರ್ಖಾನೆ ಬೊಂಬನ್ನೇ ಮೂಲ ಕಚ್ಚಾವಸ್ತುವಾಗಿ ಬಳಸುವ ಕಾರ್ಖಾನೆಯಾಗಿ ಪರಿವರ್ತನೆಗೊಂಡು ಅನೇಕ ವರ್ಷಗಳ ಕಾಲ ನಡೆಯಿತು. ಈಗ ಉತ್ಪಾದನೆ ಸ್ಥಗಿತಗೊಂಡಿದೆ. 

 ಬೊಂಬನ್ನಷ್ಟೇ ಅಲ್ಲದೆ, ಬಾಳೆನಾರು, ಹಳೆಯ ಗೋಣಿನಾರು, ನೆಲ್ಲುಹುಲ್ಲು (ಬತ್ತದ ಹುಲ್ಲು), ಹಳೆಯ ಕಾಗದಗಳನ್ನು ಉಪಯೋಗಿಸಿ ಕಾಗದ ಅಥವಾ ರಟ್ಟನ್ನು ತಯಾರಿಸುವ ಅನೇಕ ಪುಟ್ಟ ಕಾರ್ಖಾನೆಗಳು ಅಸ್ತಿತ್ವದಲ್ಲಿವೆ.

 ಅರಣ್ಯಗಳು ಕುಗ್ಗುತ್ತಿದ್ದು ಈ ಎಲ್ಲ ಕಾರ್ಖಾನೆಗಳೂ ತಮ್ಮ ಉತ್ಪಾದನಾ ಸಾಮಥ್ರ್ಯಗಳನ್ನು ಹೆಚ್ಚುಹೆಚ್ಚಾಗಿ ಹೆಚ್ಚಿಸುತ್ತಿರುವುದರಿಂದ ಬೊಂಬಿನ ಬೇಡಿಕೆ ಹೆಚ್ಚುತ್ತಿದೆ. ಇಷ್ಟನ್ನೂ ಮತ್ತು ಮುಂದೆ ಬರುವ ಬೊಂಬಿನ ಬೇಡಿಕೆಗಳನ್ನೂ ಪೂರೈಸಲು ನಮ್ಮ ಅರಣ್ಯಗಳು ಅಸಮರ್ಥವಾಗುತ್ತಿವೆ. ಹೀಗಾಗಿ ಕರ್ಪೂರದ ಮರವನ್ನು ಪಲ್ಪಿಗಾಗಿ ಉಪಯೋಗಿಸಲು ಹೆಚ್ಚು ಹೆಚ್ಚು ಯಶಸ್ವೀ ಪ್ರಯತ್ನಗಳು ನಡೆಯುತ್ತಿವೆ. ಕಾಗದ ತಯಾರಿಕೆಗೆ ಬೇಕಾಗುವ ಮತ್ತೆಲ್ಲ ಕಚ್ಚಾ ವಸ್ತುಗಳೂ ಕನ್ನಡ ನಾಡಿನಲ್ಲೇ ದೊರೆಯುತ್ತವೆ.

 ಕಾಗದ ಉದ್ಯಮದಲ್ಲಿ ಅಖಿಲ ಭಾರತ ಉತ್ಪಾದನಾ ಶಕ್ತಿ 9,00,000 ಟನ್. ಕರ್ನಾಟಕದ ಕಾರ್ಖಾನೆಗಳ ಒಟ್ಟು ಉತ್ಪಾದನೆ 1,02,000 ಟನ್. ಕರ್ನಾಟಕದಲ್ಲಿ ಉತ್ತಮ ವಿದ್ಯುತ್ ಮತ್ತು ನೀರಿನ ಸೌಲಭ್ಯ ವಿಶಾಲವಾದ ಬಿದಿರಿನ ಕಾಡುಗಳು ಇರುವುದಲ್ಲದೆ, ಕಬ್ಬಿನ ಸಿಪ್ಪೆ, ನೆಲ್ಲು ಹುಲ್ಲು ಇತ್ಯಾದಿಗಳೂ ಸಾಕಷ್ಟು ಪ್ರಮಾಣದಲ್ಲಿ ದೊರಕುತ್ತವಾಗಿ ಈ ಉದ್ಯಮ ಮತ್ತಷ್ಟು ಬೆಳೆಯುವ ಸಾಧ್ಯತೆ ಇದೆ.          (ಟಿ.ಕೆ.ಆರ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ